ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಬಲಿಪ ವಿಚಾರ ಸಂವಾದ

ಲೇಖಕರು :
ರಾಜ್ ಕುಮಾರ್
ಮ೦ಗಳವಾರ, ಒಕ್ಟೋಬರ್ 22 , 2013

ತೆ೦ಕು ತಿಟ್ಟಿನ ಯಕ್ಷಗಾನದ ಪರಮ ಅಭಿಮಾನಿಯೂ ಲೇಖಕರೂ ಆಗಿರುವ ರಾಜ್ ಕುಮಾರ್ ಅವರ ಬ್ಲಾಗ್ http://yakshachintana.wordpress.com ನಲ್ಲಿ ಪ್ರಕಟಗೊ೦ಡ ಈ ಸ೦ದರ್ಶನವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. ಅತ್ಯಂತ ಸರಳವಾದ ಈ ಸಂವಾದ ಕಾರ್ಯಕ್ರಮದಲ್ಲಿ ಅತ್ಯಂತ ಅಮೂಲ್ಯವಾದ ಪ್ರಶ್ನೆ ಜಿಜ್ಞಾಸೆಗಳಿಗೆ ಶ್ರೀ ಬಲಿಪ್ಪರು ತಮ್ಮ ಅನುಭವದ ಜ್ಞಾನದ ಮಾತುಗಳಿಂದ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದರು. ಯಕ್ಷಗಾನದ ದೃಷ್ಟಿಯಿಂದ ಇದೊಂದು ಅಮೂಲ್ಯ ದಾಖಲೀಕರಣವಾಗುವ ಸಕಲ ಸಂಪನ್ಮೂಲವಾಗಬಲ್ಲುದು. ಆಸಕ್ತರಿಗೆ ಇದು ಉಪಯುಕ್ತವಾಗಬಹುದು.

****************




ಬಲಿಪ ನಾರಾಯಣ ಭಾಗವತರು
ತೆಂಕು ತಿಟ್ಟು ಯಕ್ಷಗಾನದ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರದು ಬಹುದೊಡ್ಡ ಹೆಸರು. ಯಕ್ಷರಂಗದ ಭೀಷ್ಮಎಂದೇ ಖ್ಯಾತಿ. ಸುಮಾರು 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ. ಪರಂಪರೆಯ ಯಕ್ಷಗಾನಕ್ಕೊಂದು ಮನ್ನಣೆ ನೀಡಿ ಇಂದಿಗೂ ಶುದ್ಧ ಯಕ್ಷಗಾನ ಶೈಲಿಯನ್ನು ಉನ್ನತ ಕಂಠಸಿರಿಯಿಂದ ಹಾಡುವ ತಾಕತ್ತುಳ್ಳ ಅಮೂಲ್ಯ ಸ್ವರಹೊಂದಿದ ಭಾಗವತರು ಇವರು. ಭಾಗವತ ಪರಂಪರೆಯನ್ನು ಮೇಲೆತ್ತಿದ ಮೇರು ವ್ಯಕ್ತಿತ್ವ. ನಿಷ್ಕಲ್ಮಶ ಕಲಾಸೇವೆಗೆ ಅವರ ಲಕ್ಷಾಂತರ ಅಭಿಮಾನಿಗಳೇ ಸಾಕ್ಷಿ. ಯಕ್ಷಗಾನದ ಹಾಡುಗಾರಿಕೆ(ಭಾಗವತಿಕೆ)ಯಲ್ಲಿ ಬಲಿಪರ ಸ್ವರಕ್ಕೆ ಅದರದ್ದೇ ಆದ ಮಹತ್ವವಿದೆ. ಕಂಚಿನ ಕಂಠದ ಅವರ ಸ್ವರ, ಹಾಡುಗಾರಿಕೆಗೆ ಮಾರುಹೋದವರು ಅನೇಕರು. ಆ ಕಾರಣಕ್ಕಾಗಿಯೇ ಬಲಿಪ ಯಕ್ಷಗಾನದಲ್ಲೊಂದು ಮೋಡಿ ಮಾಡಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಹಾಡುವ ಬಲಿಪರು ತಮ್ಮ ಕಲಾ ಸೇವೆಯುದ್ದಕ್ಕೂ ಹಾಡುಗಾರಿಕೆಯ ಮೂಲಕ ಯಕ್ಷರಂಗಕ್ಕೊಂದು ಜೀವ ಕಳೆ ತುಂಬಿದ್ದಾರೆ.

****************





ಸಂದರ್ಶಕರು : ನಮಸ್ಕಾರ ಭಾಗವತರೆ.

ಬಲಿಪ್ಪರು: ನಮಸ್ಕಾರ

ಸಂದರ್ಶಕರು : ಈಗ ಯಕ್ಷಗಾನದ ಬಗ್ಗೆ ನಿಮ್ಮಲ್ಲಿ ಕೆಲವೊಂದು ಪ್ರಶ್ನೆಗಳು. ಯಕ್ಷಗಾನದ ಮೂಲ ರಾಗಗಳು ಯಾವುವು? ಅವುಗಳಲ್ಲಿ ಎಷ್ಟು ವಿಧ. ?ರಾಗ ಮತ್ತ ತಾಳಗಳಲ್ಲಿ ಎಷ್ಟು ವಿಧ?

ಬಲಿಪ್ಪರು: ಯಕ್ಷಗಾನದಲ್ಲಿ ಪ್ರಸಂಗ ಬರಿಯುವಾಗ ಮೂಲದಲ್ಲಿ ಮೊದಲೇ ರಾಗ ಹಾಕಿರುತ್ತಾರೆ. ಮತ್ತೆ ಇತ್ಲಾಗಿ ಎಲ್ಲ ಬರಿಯುವವರು ಅದನ್ನು ಬೇರೆ ಬೇರೆ ರಾಗ ಹೊಸದಾಗಿ ಹಾಕಿ ಬರೆದಿರುತ್ತಾರೆ. ಅದರೆ ಮೂಲದಲ್ಲಿ ಪ್ರಸಂಗದಲ್ಲಿ ಹಾಕಿದ ರಾಗಗಳು ಉಂಟು. ಅದು ಓಲೆ ಪ್ರತಿ ಇತ್ಯಾದಿಗಳಲ್ಲಿ ಇರಬಹುದು. ಮತ್ತೆ ಪ್ರಿಂಟಿಗೆ ಕೊಡುವವರು ಬರೆಯುವವರು ಅದನ್ನೆ ವ್ಯತ್ಯಾಸ ಮಾಡಿ ಹಾಕಿದ್ದಾರೆ. ಇಗ ಉಧಾಹಣೆಗೆ ಕಾಪಿ ಅಷ್ಟತಾಳ ಅಂತ ಉಂಟು ಆ ಕಾಪಿ ಅಷ್ಟತಾಳದ ಛಂದಸ್ಸು ಪದ್ಯದ ರಚನೆ ಎಲ್ಲಾ ಪ್ರಸಂಗಗಳಲ್ಲು ಒಂದೆ. ಆ ಕಾಪಿ ರಾಗದ ಪದ್ಯವನ್ನು ಹೇಳುವವ ಅದನ್ನು ಬಿಲ್ಹರಿಯಲ್ಲಿ ಹೇಳಬಹುದು. ಅವನು ಅದನ್ನು ಬರಿವಾಗ ಬಲ್ಹರಿ ಅಷ್ಟತ್ತಾಳ ಅಂತ ಹಾಕಿರಬಹುದು. ಗೊತ್ತಾಯ್ತಲ್ಲ. ಹಾಗೆ ವ್ಯತ್ಯಾಸಗಳು ಬಂದದೆ. ಹಾಗೆಂತ ಮೂಲದಲ್ಲಿ ಈಗ ಭೈರವಿ ಝಂಪೆ ಅಂತ ಉಂಟು. ಭರವಿ ಝಂಪೆಯದ್ದೆ ಛಂದಸ್ಸು. ಅದಕ್ಕೊಂದು ಹೇಳುವ ಕ್ರಮ ಉಂಟು. ಕಾಂಬೋಧಿ ಝಂಪೆ ಅಂತ ಉಂಟು ಅದನ್ನು ಹೇಳುವ ಕ್ರಮ ಹೀಗೆ ಉಂಟು, ಅಮೇಲೆ ಭೈರವಿ ಅಷ್ಟತ್ತಾಳ, ಭೈರವಿ ಏಕತ್ತಾಳ ಮಾರವಿ ಏಕತ್ತಾಳ. ಈ ಪದ್ಯಗಳಗೆ ಛಂದಸ್ಸು ಬರೆದಿದ್ದಾರೆ ಅದನ್ನು ಹೇಳುವ ಕ್ರಮವೂ ಹಾಗೆ. ಆ ರೀತಿಯಾಗೆ ಇದ್ದದ್ದು ಮೊದಲು. ಆಮೇಲೆ ಸಮಯೋಚಿತವಾಗಿ ರಾಗ ಬಳಸಕೊಳ್ಳುವುದು ಅಂತ ಉಂಟು. ಪ್ರಸಂಗಗಳು ಜತೆ ಮಾಡುವಾಗ. ಸೌರಾಷ್ಟ್ರ ರಾಗ.

ಇದು ಯಕ್ಷಗಾನದಲ್ಲಿ ಮುಖ್ಯ ಇದ್ದದ್ದು ರಾಗ ಅದು ಹೋಯ್ತು. ಅದು ಒಂದು ಪ್ರಸಂಗಕ್ಕೆ ಒಂದು ಪ್ರಸಂಗ ಜತೆ ಮಾಡುವಾಗ ಅವರು ಕವಿಗಳು ಬರಿಯುದು ಒಂದೇ ಪ್ರಸಂಗ. ಇಡೀ ರಾತ್ರೆಗೆ ಒಂದೇ ಪ್ರಸಂಗ. ಅದನ್ನು ತುಂಡು ಮಾಡಿ ಬೇರೆ ಕಡೆ ಹಾಕುವಾಗ ರಾಗಗಳು ಬದಲು ಅಗುತ್ತದೆ. ಶುರುವಿನ ಭಾಗ ಮುಂದಿನ ಭಾಗಕ್ಕೆ ಹೋಗುತ್ತದೆ. ಉಧಾಹರಣೆಗೆ ಅತಿಕಾಯ ಕಾಳಗ ಇಂದ್ರಜಿತು ಕಾಳಗ ಮೈರಾವಣ ಕಾಳಗ ತೆಕ್ಕೊಳ್ತದೆ. ಇದು ಜತೆ ಮೊದಲಿಂದಲೇ ಇದ್ದದ್ದು. ಅದು ಹಾಗೆ ತೆಕ್ಕೊಂಡು ಹೋಗುವಾಗ ರಾಗಗಳು ಕ್ರಮಪ್ರಕಾರವಾಗಿ ಹೋಗ್ತದೆ. ಇದರಲ್ಲಿ ಅತಿಕಾಯ ಕಾಳಗ ಬಿಟ್ಟು ಇಂದ್ರಜತು ಮೈರಾವಣ ಮತ್ತು ರಾವಣ ವಧೆ ತೆಕ್ಕೊಂಡ್ರೆ, ಇಂದ್ರಜಿತು ಶುರುವಿಗೆ ಮೈರಾವಣ ಮಧ್ಯಕ್ಕೆ ಬೀಳ್ತದೆ ಆವಾಗ ಅದರ ಕ್ರಮವೇ ಬೇರೆ. ಮತ್ತೆ ಮೈರಾವಣ ಕಾಳಗ ರಾವಣ ವಧೆ ಕುಶಲವರ ಕಾಳಗ ತೆಕ್ಕೊಂಡ್ರೆ ಆಗ ಮೈರಾವಣ ಮೊದಲಿಗೆ ಬೀಳ್ತದೆ. ಹೀಗೆ ರಾಗಗಳು ವ್ಯತ್ಯಾಸ ಅಗುದಲ್ಲದೆ ಮತ್ತೆ ಅದರಲ್ಲಿ ಹಾಕಿದ ರಾಗಗಳು ಅದರಲ್ಲೇ ಹೇಳ್ಬೇಕು.

ಕಾಲಕ್ಕೆ ತಕ್ಕ ಹಾಗೆ ರಾಗಗಳು ಬದಲಾಗ್ತದೆ. ರಾತ್ರಿಯನ್ನು ನಾಲ್ಕು ಕಾಲ ಮಾಡಿ ಹೇಳುವಾಗ ಇಡೀ ಬೆಳಗ್ಗಿನವರೆಗೆ ತೆಗೆದು ಕೊಳ್ಳುವುದು ಕ್ರಮ. ನಾಲ್ಕು ಕಾಲ ಅಂದ್ರೆ ಮೊದಲೆಲ್ಲ ಹನ್ನೆರಡು ಗಂಟೆ ಆಗ್ತಿತ್ತು. ಈಗ ಹತ್ತು ಗಂಟೆ ಅಂದ್ರೆ ಹತ್ತರಿಂದ ಹನ್ನೆರಡು ಹೀಗೆ ರಾತ್ರಿಯನ್ನು ನಾಲ್ಕು ಪಾಲು ಮಾಡಿ ಹೇಳುವ ಕ್ರಮ.

ಸಂದರ್ಶಕರು : ಈಗ ರಾಗದ ಬಳಕೆ ಬಗ್ಗೆ. ಕೆಲವರು ಹಿಂದುಸ್ಥಾನಿ ರಾಗಗಳನ್ನು ಹಾಕ್ತಾರೆ. ಕೆಲವರು ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗವನ್ನು ಬಳಸ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ.

ಬಲಿಪ್ಪರು: ಅಂದ್ರೆ ಬಳಸುವುದು ಅವರವರಿಗೆ ಗೊತ್ತಿದ್ದನ್ನು ಬಳಸುದು.

ಸಂದರ್ಶಕರು : ಹೌದು, ವೃಂದಾವನ ಸಾರಂಗ ಇತ್ಯಾದಿಗಳನ್ನು ಹಾಕ್ತಾರೆ.

ಬಲಿಪ್ಪರು: ಯಕ್ಷಗಾನಕ್ಕೆ ಯಕ್ಷಗಾನದ್ದೇ ಧಾಟಿ ಅಂತ ಉಂಟು. ಸಂಗೀತಕ್ಕೆ ಸಂಗೀತದ್ದೇ ಧಾಟಿ ಅಂತ ಉಂಟು. ಗೊತ್ತಾಯ್ತಲ್ಲ? ಯಾವ ಗಾಯನಕ್ಕು ಅಯಾಯ ಪದ್ದತಿ ಅಂತ ನಮ್ಮಲ್ಲಿರುವುದು ಈ ರಾಗಳು ಅಂತಂದ್ರೆ ಮಟ್ಟಿಗೆ ಹೊಂದಿಕೊಂಡು ಇರುವುದು. ಈಗ ವೃಂದಾವನ . ವೃಂದಾವನ ಅಂದ್ರೆ ರಾಗ ಹಾಕುವುದು. ಅದಕ್ಕೆ ಪದ್ಯ ಇಲ್ಲ. ವೃಂದಾವನ ರಾಗದ ಪದ್ಯ ಪ್ರಸಂಗದಲ್ಲಿ ಇಲ್ಲ. ಅದರ ಛಂದಸ್ಸೂ ಇಲ್ಲ. ನಾವು ಯಾವುದಕ್ಕೊ ಕಾಂಬೊಧಿಗೋ. ಕಲ್ಯಾಣಿಗೋ ಭೈರವಿಗೋ ಒಬ್ವರು ವೃಂದವನ ಹಾಕ್ಬಹುದು . ಹಾಕ್ಬಾರದು ಅಂತ ಇಲ್ಲ. ಈಗ . ಸಮಯೋಚಿತ ರಾಗ ಹಾಕ್ಬಾರದು ಅಂತ ಹೇಳಿದ್ದಲ್ಲ. ರಾಗ ಯಾವುದೂ ಹಾಕಲಿ. ಅವರವರು. ಅದನ್ನು ಹಾಕುವಾಗ ಅದರಲ್ಲಿ, ಯಕ್ಷಗಾನ ಕಾಣ್ಬೇಕು ಕೇಳುವವನಿಗೆ. ಈಗ ಉಳಿದ ಯಕ್ಷಗಾನದ ಪದ್ಯಗಳು ಹೇಳಿದ ಹಾಗೆ ಅದು ಸಂಗೀತವಾಗಿ ಇರಬಾರದು ಅದು ಯಕ್ಷಗಾನವಾಗಿಯೇ ಇರಬೇಕು. ರಾಗ ಯಾವುದೂ ಹಾಕ್ಲಿ. ಕಲ್ತದ್ದನ್ನು ಹಾಕುದು. ಅವರವರು ಕಲ್ತದ್ದನ್ನು ಉಪಯೋಗಿಸುದು. ಅದೇ ವೃಂದಾವನ ರಾಗ ಹಾಕುವ ವ್ಯಕ್ತಿಯತ್ರ ಒಂದು ಯಕ್ಷಗಾನವನ್ನೂ ಹೇಳಿಸ್ಬೇಕು. ಒಂದು ಅವನು ಕಲ್ತ ಸಂಗೀತದ ರಾಗವನ್ನೂ ಹೇಳಿಸ್ಬೇಕು. ಅದು ಬೇರೆ ಬೇರೆ ಆಗಿ ಉಂಟೊ ಅಂತ ನೋಡ್ಬೇಕು. ರಾಗ ಯಾವುದು ಬಳಸ್ಬಹುದು. ಅದು ಯಕ್ಷಗಾನವಾಗಿ ಉಂಟೊ ಅಂತ ನೋಡ್ಬೇಕು.

ಯಕ್ಷಗಾನಕ್ಕೆ ಈಗ ರಾಗ ಯಾವುದು ಅಂತ ಪ್ರಶ್ನೆ ಬರಬಹುದು. ಅದರ ವಿಧಾನ ಹೇಗೆ ಅಂತ ಪ್ರಶ್ನೆ ಬರಬಹುದು. ಯಕ್ಷಗಾನಕ್ಕೆ ಆ ಪದ್ಯಗಳು ಬರೀತಾರಲ್ಲ ? ಸೌರಾಷ್ಟ್ರ ತ್ರಿವುಡೆ, ಮಧ್ಯಮಾವತಿ ತ್ರಿವುಡೆ, ಆ ಛಂದಸ್ಸು ಪ್ರಕಾರ ಅದಕ್ಕೆ ಹೆಸರು. ಅದನ್ನು ಹಾಡುದು ಯಕ್ಷಗಾನಕ್ಕೆ ಹೊಂದಿಕೊಂಡು ಅಂದರೆ ನಿತ್ಯ ಚೆಂಡೆ ಮದ್ದಲೆಗೆ ಹೊಂದಿಕೊಂಡು ಪದ್ಯಗಳನ್ನು ಹಾಡುವುದು. ಅವಾಗ ಸಂಗೀತದ ರಾಗ, ರಾಗವಾಗಿ ತಿಳಿವಷ್ಟು ಪುರುಸೊತ್ತು ಇಲ್ಲ. ಅಷ್ಟಾಗುವಾಗ ಮುಗಿಯುತ್ತದೆ. ಅಂತು ಅದರ ಒಂದು ಛಾಯೆ ಇದು ಮಧ್ಯಮಾವತಿ. ಆಗಿರಬಹುದು ಅಂತ. ಅಷ್ಟೇ ಅಲ್ಲದೆ ಶುದ್ದ ರಾಗ ಉಳೀಲಿಕ್ಕಿಲ್ಲ . ಮತ್ತೇ ಭಾಗವತಿಕೆ ಬಿಟ್ಟು ಸಂಗೀತ ಕಛೇರಿಯೇ ಮಾಡಬೇಕಾದೀತು.

ಸಂದರ್ಶಕರು : ಯಕ್ಷಗಾನದಲ್ಲಿ ಧ್ರುವತಾಳ ಅಂತ ಮೊದಲು ಇತ್ತಂತೆ. ಅದರ ವಿಶೇಷತೆ ಏನು?

ಬಲಿಪ್ಪರು: ಧ್ರುವತಾಳ ಅದು ಮೊದಲೇ ಉಂಟು ಈಗಲೂ ಇದೆ ಆದರೆ ಜನರಿಗೆ ಗೊತ್ತಿಲ್ಲದೇ ಹೋಗಿದೆ. ಈಗಿನ ಯಾವ ಭಾಗವತನು ಅದನ್ನು ಹಾಕುವುದಿಲ್ಲ. ಅದು ನನ್ನ ಗಮನಕ್ಕೂ ಬರಲಿಲ್ಲ. ಮತ್ತೆ ಧ್ರುವತಾಳ ಅಂತ ಹಾಕುವುದಿಲ್ಲ. ಆದರೆ ಧ್ರುವತಾಳದ ಪದ್ಯ ಹೇಳ್ತಾರೆ. ಅದು ಅವರಿಗೆ ಗೊತ್ತಿಲ್ಲ ಅದು ಯಾವುದು ಅಂತ . ವಟ್ಟಾರೆ ಉಪಯೋಗಿಸುವುದು ತ್ರಿವುಡೆ. ಜಾಗಟೆಯಲ್ಲಿ ಬಡಿಯುದು. ತ್ರಿವುಡೆ. ಅದಕ್ಕೆ ಬಿಡಿತ ಇಲ್ಲ. ಅದಕ್ಕೆ ಹದಿನಾಲ್ಕು ಮಾತ್ರೆ ಒಂದು ತಾಳಕ್ಕೆ ನಡೀಬೇಕು. ಮತ್ತು ನಡೀತದೆ. ಈ ಭಾಗವತರುಗಳಿಗೆ ಅದು ಧ್ರುವತಾಳ ಅಂತ ಗೊತ್ತಿಲ್ಲ. ಒಂದು ಧ್ರುವತಾಳ ಅಂದರೆ ಹದಿನಾಲ್ಕು ಮಾತ್ರೆ ಅಗ್ತದೆ. ಉದಾಹರಣೆಗೆ: “ಶಂಕರಿ ಸರ್ವೇಶ್ವರಿ ವರದಭಾ. ”ಇದು ಒಂದು ತ್ರಿವುಡೆ ಆಯ್ತು. ಇಲ್ಲಿಗೆ ಮಾತ್ರೆಗಳು ಹದಿನಾಲ್ಕು ಆಯ್ತು. ಅದರಲ್ಲಿ ಬಿಡಿತ ಅಂತ ಎಲ್ಲೂ ಇಲ್ಲ ಯಾಕಂದ್ರೆ ಅದು ದೊಡ್ಡ ತಾಳ. ಅದಕ್ಕೆ ಮಾಡಿದ್ರೆ ಇನೂ ಉದ್ದ ಆಗ್ತದೆ. ಅದಕ್ಕೆ ಬಿಡಿತ ಮುಕ್ತಾಯ ಎಲ್ಲ ಒಂದೇ ತಾಳ. ಈಗೆಲ್ಲ ಮಾಡಿಕೊಂಡಿದ್ದಾರೆ. ಈಗ ನಮ್ಮ ಆದಿತಾಳಕ್ಕೂ ಅಂತ್ಯ ತಾಳಕ್ಕೂ ಮುಕ್ತಾಯ ಬಿಡ್ತಿಗೆ. ಇದಕ್ಕೂ ಮುಕ್ತಾಯ ಬಿಡ್ತಿಗೆ. ಒಂದು ತ್ರಿವುಡೆ ತಾಳ ಬಡಿದ್ರೆ ಆಯಿತು. ಅಂದ್ರೆ ಏಳು ಮಾತ್ರೆ ತ್ರಿವುಡೆಗೆ ಇದಕ್ಕೆ ಸರಿ ಎರಡು ಪಟ್ಟು ಅಂದ್ರೆ ಹದಿನಾಲ್ಕು ಮಾತ್ರೆ. ಹಾಗಾಗಿ ತ್ರಿವುಡೆಯನ್ನೇ ಬಡೀತಾರೆ. ಅದೆ ಲಯದಲ್ಲಿ ಇರ್ತದೆ ಮೊದಲು ಉಪಯೋಗ ಇತ್ತು ಈಗಲು ಉಂಟು ಆರತಿ ಪದ್ಯಕ್ಕ ಬಡಿತಾರೆ. ಬೇರೆ ಉಪಯೋಗಕ್ಕೆ ಬರುವುದಿಲ್ಲ.

ಆದ್ರೆ ದ್ರುವ ತಾಳಕ್ಕೆ ಅದರದ್ದೇ ಪದ ಇಲ್ಲಾಂತ ಇಲ್ಲ ಅದರೆ ಹೇಳಿದರೆ ಅದಕ್ಕೆ ಸರಿಯಾದ ನಾಟ್ಯ ತಯಾರಿ ಇಲ್ಲ. ಮೊದಲು ಇತ್ತೋ ಇಲ್ವೋ ಗೊತ್ತಿಲ್ಲ. ಆದರೆ ಧ್ರುವತಾಳಕ್ಕೆ ಇಂತಹುದೇ ನಾಟ್ಯ ಅಂತ ಇಲ್ಲ. ಬೇರೆಲ್ಲದಕ್ಕೂ ಉಂಟು. ನನ್ನ ಅನುಭವದಲ್ಲಿ ಧ್ರುವತಾಳಕ್ಕೆ ಬೇಕಾದ ನಾಟ್ಯ ಅಂತ ಬರಲಿಲ್ಲ. ಮತ್ತೆ ತ್ರಿವುಡೆ ಕುಣಿತಾರೆ.

ಸಂದರ್ಶಕರು : ಕಾಲಮಿತಿ ಯಕ್ಷಗಾನ ಅಂತ ಆಡುತ್ತಾರೆ. ಈ ಕಾಲಮಿತಿ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬಲಿಪ್ಪರು: ಅಂದರೆ, ಕಾಲಮಿತಿ ಯಕ್ಷಗಾನ ಅಂತ ಅದು ಮೊದಲಿಗೇ ಇಲ್ಲ. ಒಂದು ಯಕ್ಷಗಾನ ಅಂತ ಅಂದ್ರೆ ಅದು ಹತ್ತು ಹನ್ನೋಂದು ಗಂಟೆಯಿಂದ ನಂತರ ಅಂತ ಲೆಕ್ಕ. ಇದು ಯಕ್ಷದ ಸಂಚಾರವೇ ಒಂದು ಗಂಟೆಯಿಂದ ಮೇಲೆ ಅಂತ ಲೆಕ್ಕ. ಗೊತ್ತಾಯತಲ್ಲ……? ಕಥೆಗೆ ಮೋಹವು ಜನರಿಗೆ ಕೇಳುವಾಂತ ಆಗುದು ಆನಂತರದ ಭಾಗವೇ. ಇವತ್ತೀಗೂ ಸಹ ಜನರಿಗೆ ಕೇಳುವಾಂತ ಆಗುದು ಆವಾಗಲೇ. ಯಕ್ಷಗಾನಾದಲ್ಲಿ ಶುರುವಿಗೆಲ್ಲ ಕೆಲವರಿಗೆ ಉದಾಸೀನ ಆಗ್ತದೆ. ಒಂದು ಗಂಟೆ, ಎರಡು ಗಂಟೆ ಮೇಲೇ ಜನರಿಗೆ, ಅಂದರೆ ಯಕ್ಷ ಸಂಚಾರ ಆ ಕಾಲಕ್ಕೆ. ಆವಾಗ ಒಂದು ಮೋಹ ಬರ್ತದೆ. ಕಥೆಗೆ ಒಂದು ಮೋಹ ಬರ್ತದೆ. ಆಗಿನ ಕಾಲದ ಪದ್ಯಗಳು ರಾಗಗಳು. ಆ ರಾಗದಲ್ಲಿ ಪದ್ಯಗಳು ಮೊದಲಿಗೆ ಹಾಡಿದ್ದರೂ ಕೂಡ ಅಲ್ಲಿಯೆ ಒಂದು ಮನಸ್ಸಿನ ಸ್ಥಿತಿಗೆ ಉಂಟಲ್ಲ ಮೋಹ ಬರ್ತದೆ ಕೂಡ. ಹಾಗಾಗಿ ಯಕ್ಷಗಾನ ಅಂದ್ರೆ ಅದು ರಾತ್ರಿ ಇಡೀ ಆಗ್ಬೇಕು.

ಮತ್ತೆ ಕಾಲ ಮಿತಿ ಎಂಭುದು ಈಗಿನ ಜನರಿಗೆ ಬೇಕಾಗಿ ಮಾಡಿಕೊಂಡಿದ್ದಾರೆ. ಜನರಿಗೆ ಪೇಕ್ಷಕರಿಗೆ ಸಮಯ ಎಂಬುದಿಲ್ಲ. ಒಂದು, ಆಮೇಲೆ ಕಲಾವಿದರೂ ಕೂಡ ಭಾರೀ ಹಿಂದೆ ಆಗಿದ್ದಾರೆ. ಜನರನ್ನುರಾತ್ರಿ ಇಡೀ ಕೂತುಕೊಳ್ಳಿಸುವ ಕಲಾವಿದರು ಇಲ್ಲದೆ ಆಗಿದ್ದಾರೆ. ಒಂದು ಯಕ್ಷಗಾನ ನಡಿಯುದಿದ್ರೆ, ಹಾಸ್ಯ, ಸ್ತ್ರೀವೇಶ, ಚೆಂಡೆ ಮದ್ಲೆ, ಪೀಠಿಕೆ ವೇಶ, ಎದುರು ವೇಶ, ಭಾಗವತ್ರು, ಹಿಮ್ಮೇಳ ಇದನ್ನೆಲ್ಲ ಹೊಂದಿಕೊಂಡಿರುವುದು. ಅದು ಆಗ್ಬೇಕೂಂತ ಆದ್ರೆ ಇದು ಎಲ್ಲ ಜನರ ಆಕರ್ಷಣೆಯವರೇ ಆಗ್ಬೇಕು. ಒಂದೊಂದರಲ್ಲಿ ಒಬ್ಬೊಬ್ಬರ ಆಕರ್ಷಣೆ ಇದ್ದಕೂಡ್ಲೆ ಬೆಳಗ್ಗಿನವರೆಗೆ ಆಟ ಸಸೂತ್ರವಾಗಿ ನಡೀತದೆ. ಅದು ಒಂದು ಎರಕ್ಕವಾಗಿ ನಡಿವಾಗ ಜನರಿಗೆ ಹೋಗುವಾಂತ ಕಂಡ್ರು ಹೋಗುದು ಬೇಡಾಂತ ಆಗ್ತದೆ. ಈಗ ಏನಾಗಿದೆ ಅಂತ ಅಂದ್ರೆ ಅಂತಹ ಕಲಾವಿದರೇ ಇಲ್ಲ. ಕಲಾವಿದರು ಇದ್ದಾರೆ ಜನಾಕರ್ಷಣೀಯ ಕಲಾವಿದರು ಇಲ್ಲ. ಬಂದ ಕೂಡ್ಲೆ ಒಮ್ಮೆ ನೋಡಿತು ಹೋಗುವಾಂತ್ಲೆ ಕಾಣುದು. ಅಲ್ಲಿಗೆ ಮುಟ್ಯದೆ. ಹಾಗಾಗಿ ಈಗ ಕಾಲಮಿತಿಯೇ ಮಾಡಬೇಕಷ್ಟೆ.

ಸಂದರ್ಶಕರು : ಹಿಂದಿನ ಆಟಗಳಲ್ಲಿ ಎಲ್ಲ ಕೆಲವೊಂದು ಪದ್ಧತಿಗಳೆಲ್ಲ ಇತ್ತು. ಈಗ ಅದು ಕಾಣ್ಲಿಕ್ಕೆ ಸಿಗುವುದಿಲ್ಲ. ಕೆಲವೊಂದು ಲುಪ್ತವಾಗಿ ಹೋಗಿದೆ. ಯುದ್ದ ಪದ್ದತಿ ಆಗಿರಬಹುದು, ಅಂತಹುದು ಈಗ ಯಾವುದು ಕಾಣದೆ ಆಗಿದೆ? ಅದರ ಬಗ್ಗೆ ಸ್ವಲ್ಪ ಹೇಳಬಹುದೇ?

ಬಲಿಪ್ಪರು: ಕಾಣದೇ ಇರುವದ್ದು ಮೊದಲು ಅತಿಕಾಯ, ಇಂದ್ರಜಿತು, ರಕ್ತಬೀಜ ಇತ್ಯಾದಿ ವೇಶಗಳುಂಟಲ್ಲ? ಒಳಗಿಂದ ಪ್ರವೇಶ ಆಗುವಾಗಲೇ ಒಂದು ಅಟ್ಟಹಾಸ ಇತ್ತು. ಆ ಅಟ್ಟ ಹಾಸ ಹೋಗ್ಯದೆ. ಇವತ್ತಿಲ್ಲ. ಇವತ್ತು ಈ ಬರೀ ಡಿಂಗ್ಣ ಬಾರಿಸಿ ನಿವುರ್ತಿ ಮಾಡ್ತಾರೆ. ಅದು ಇತ್ತು ಎನ್ನುವುದಕ್ಕೆ ಒಂದು, ಅಂದರೆ ಅದನ್ನು ನನ್ನ ಅಜ್ಜ (ದೊಡ್ಡ ಬಲಿಪ್ಪರು) ಬರೆದ ಒಂದು ದೇವಿ ಮಹಾತ್ಮೆ ಪ್ರಸಂಗದಲ್ಲಿ ಉಂಟು. ಅದು ಈಗಲೂ ಉಂಟು. ಅದು- “ಪೃಥ್ವಿ ಬಿರಿಯುವ ತೆರದಿ ಆರ್ಭಟೆವೆತ್ತುತಾ ಬಂದಾ ರಣ ಭಯಂಕರ ರಕ್ತಬೀಜಾಸುರನು ಬಳಿಕಿಂತೆಂದನಾ. ” ಈ ಆರ್ಭಟೆ ಅವನು ಒಳಗಿಂದ ಕೊಡ್ಬೇಕು. ಗೊತ್ತಾಯ್ತಲ್ಲ? ಒಳಗೆ ಅಂದ್ರೆ ರಂಗಸ್ಥಳದ ಹೊರಗೆ. ಅಂತಹುದು ಇಂದ್ರಜಿತುಗೆ ಇತ್ಯಾದಿಗಳಿಗೆ ಇತ್ತು. ಅದು ಪ್ರಸಂಗದ ಪದ್ಯದಲ್ಲಿ ಇಲ್ಲ. ಅಜ್ಜ ಅದನ್ನು ಪದ್ಯದಲ್ಲಿ ಗೊತ್ತಾಗ್ಲಿಕ್ಕೆ ಬರೆದದ್ದು. ಜನರಿಗೆ ಗೊತ್ತಾಗ್ಲಿಕ್ಕೆ ಬೇಕಾಗಿಯೇ ಬರೆದದ್ದು. ಅವರು ಆಟ ಆಡಿಸುವ ಕ್ರಮ ಎಲ್ಲ ಬರೆದಿದ್ದಾರೆ. ಅವರ ಪದ್ಯದಲ್ಲಿ ನೋಡಿದ್ರೆ ಗೊತ್ತಾಗ್ತದೆ. ಈಗ ಪ್ರತಿಗಳಲ್ಲಿ ಇಲ್ಲ. ಮೊದಲು ಕ್ರಮವಾಗಿ ಇತ್ತು. ಪ್ರಸಂಗದಲ್ಲಿ ಬರೀಲಿಲ್ಲ. ಆರ್ಭಟೆ ಕೊಡುವುದು ಎಲ್ಲ ಬಣ್ಣದ ವೇಶಗಳಿಗೂ ಆಗ್ಬೇಕು. ಅದು ಅರ್ಧ ತುಂಡು ಹೋಗ್ಯದೆ. ಆಮೇಲೆ ಶೂರ್ಪನಖಿ ನೃತ್ಯ ಎಲ್ಲ ಇತ್ತು. ರಂಗಸ್ಥಳದ ಹಿಂದೆ ಬೆಂಕಿ ಎಲ್ಲ ಹಾಕಿ ಕುಣಿಯುದು ಅದು ಎಲ್ಲ ಹೋಗ್ಯದೆ. ಕಿರಾತನ ನೃತ್ಯ ಎಲ್ಲ ಇತ್ತು ಅದು ಹೋಗ್ಯದೆ.

ಸಂದರ್ಶಕರು : ಯುದ್ದ ಸನ್ನಿವೇಶದಲ್ಲಿ , ಈ ತಾಮ್ರಧ್ವಜನ ಸನ್ನಿವೇಶದಲ್ಲಿ ಚದುರಂಗ ಸೇನೆ ಅದು ಹೇಗೆ?

ಬಲಿಪ್ಪರು: ಹೌದು, ಅದೂ ಹೋಗ್ಯದೆ. ಚತುರಂಗ ಸೇನೆ ಯುದ್ದದಲ್ಲಿ, ರಥ ಹತ್ತುವ ಸನ್ನಿವೇಶದಲ್ಲಿ ಎಲ್ಲ ಇತ್ತು. ಅದು ಹೋಗ್ಯದೆ.

ಸಂದರ್ಶಕರು : ಚದುರಂಗ ಸೇನೆ ಅದು ಹೇಗೆ?

ಬಲಿಪ್ಪರು: ಅದು ನಾಲ್ಕು ಆನೆ , ಕುದುರೆ, ರಥ, ಕಾಲಾಳು. ಇದು ನಾಲ್ಕೂ ಸುತ್ತು ಬರ್ಬೇಕು. ಅದು ಒಂದೊಂದು ಸುತ್ತಿಗೆ ಒಂದೊಂದನ್ನು ಅವನು ತೋರಿಸ್ಬೇಕು. ಅದು ಇತ್ತು. ಅದು ನನ್ನ ಕಾಲಕ್ಕೆ ಹೋಗ್ಯದೆ ನನ್ನ ಆರಂಭದ ಕಾಲದಲ್ಲಿ ಇತ್ತು . ಇಲ್ಲಾಂತ ಹೇಳುದಿಲ್ಲ ಹೋಗ್ಯದೆ ಮತ್ತೆ ಮತ್ತೆ ಹೋಯ್ತು ಅದು. ಕುಣಿವವ ಕುಣಿಯದೆ ಹೋಯ್ತು. ಮದ್ಲೆಗಾರ ಬಡಿಯದೆ ಹೋಯ್ತು. ಇತ್ತು ಅದು. ಮತ್ತೆ ಜೋಡಿ ಪಗಿಡಿ ಕಿರಾತ ಅಂತ ಇತ್ತು. ಅದು ಸಣ್ಣ ಕಿರಾತ. ದೊಡ್ಡ ಕಿರಾತನನ್ನು ಮಾಡುವ ಕ್ರಮ ಇಲ್ಲ. ಅದು ಹೋಗಿದೆ.

ಸಂದರ್ಶಕರು : ಈಗ ಬಡಗಿನಲ್ಲಿ ಕೆಲವರು ಮಾಡ್ತಾರಲ್ಲ?. ಜೋಡಿ ಪಗಿಡಿ ಕಿರಾತ ಅಂತ.

ಬಲಿಪ್ಪರು: ಹೌದು . ಅವರು ಅದನ್ನು ಉಳಿಸಿಕೊಂಡಿದ್ದಾರೆ. ನಮ್ಮಲ್ಲಿ ಕಳಕೊಂಡಿದ್ದಾರೆ. ಅಷ್ಟೇ ಹೇಳುದು. ಇಲ್ಲಿ ಇತ್ತು. ಒಂದೂ ಕಿರಾತನ ಪಗಡಿ. ಅದು ಒಂದು ಭಾಗಕ್ಕೆ ದೊಡ್ಡದು ಕಟ್ಟುದು. ಮತ್ತೊಂದು ಭಾಗಕ್ಕೆ ಈ ನಿತ್ಯವೇಶದ ಪಗಡಿಯನ್ನು ಕಟ್ಟುದು. ಇಲ್ಲಿ ಹಾಗೆ ಇತ್ತು ಕ್ರಮ. ಚಿಕ್ಕ ಪಗಡಿ. ಅದನ್ನು ಕಟ್ಟುದು. ಎರಡು ಪಗಡಿ ಕಟ್ಟಿಮಾಡ್ತಿದ್ದರು. ಆಡ್ತಿದ್ರು. ನಾನು ಆಡಸಿದ್ದೇನೆ. ಯಾರುಂತ ಹೇಳ್ತೆನೆ. ಈ ಪಡ್ರೆ ಚಂದು ಅಂತ ಬಣ್ಣದವ ಇದ್ದ. ಕುಂಬಳೆ ತಿಮ್ಮಪ್ಪು, ಹಂದಿ ತಿಮ್ಮಪ್ಪ ಅಂತ ಹೇಳ್ತಿದ್ರು. ಮತ್ತೆ ಅಗಲ್ಪಾಡಿ ಕುಞ್ಞಿ ಕೃಷ್ಣ ಇವರೆಲ್ಲ ನನ್ನ ಇದರಲ್ಲಿ ಮಾಡಿದವರು. ಅದರ ನಂತ್ರ ಕಾಣ್ಲಿಲ್ಲ. ನಾನು ಮಾಡಿಸಿದ್ದೇನೆ. ಎಲ್ಲ ಇತ್ತು. ಹೀಗೆ ಇನ್ನು ಮತ್ತೆ ತಾಳಗಳಲ್ಲಿ ಹೇಳುವುದಾದರೆ ಚೌತಾಳ ಅಂತ ಇತ್ತು ಅದು ಹೋಗ್ಯದೆ.

ಸಂದರ್ಶಕರು : ಚೌತಾಳ ಅಂದ್ರೆ ಹೇಗೆ ಅದು?

ಬಲಿಪ್ಪರು: ಚೌತಾಳ ಅಂದ್ರೆ ಅದು ಆದಿ ತಾಳವೇ ಅದು. ಆದಿ ತಾಳದ್ದೇ ಒಂದು ಲಯ. ಪದ್ಯ ಎತ್ತುಗಡೇಯಲ್ಲಿ ಇರುದು. ಈಗ ಅಂತಹ ತಾಳವೇ ಇಲ್ಲ.

ಸಂದರ್ಶಕರು : ಈ ತಿತ್ತಿಥೈ ಅಂತ ಹೇಳ್ತಾರಲ್ಲ. ?

ಬಲಿಪ್ಪರು: ತಿತ್ತಿಥೈ ಅಂತ ಬೇರೆ. ತೈತಿತ್ತಿ ಬೇರೆ ಇದೆ.

ಸಂದರ್ಶಕರು : ಏನು ವ್ಯತ್ಯಾಸ ಅದಕ್ಕೆ?

ಬಲಿಪ್ಪರು: ಈಗ ನೋಡಿ ಎಲೆ ಮಾನವ ನೀ ಸಲೆಕೈ ಚಲಕದಿ…. ಇದು ತಿತ್ತಿಥೈ…( ತಾಳಹಾಕಿತೋರಿಸಿ) ಇದು ಒಂದು. ಇನ್ನೊಂದು ಮಧ್ಯದಿಂದ ತೆಗಿಯುದು. ಹಾಗೆ ತೆಗಿಬೇಕಿದ್ರೆ ಆದಿ ಪೆಟ್ಟು ಗಟ್ಟಿ ತ್ತಿ ತಿಥೈ. ನೋಡಿ, ತೊಂತನ ಧಿತ್ತನಂ. ತೊಂತನ ಧಿತ್ತನಂ. ತೊಂತನ ಧಿತ್ತನಂ. ಇದು ಮಧ್ಯದಿಂದ ಬಡಿಯುದು. “ ಈ ಮನವಿದ್ದಂತಾಮನಸಾದರೆ ಪ್ರೇಮದೊಳನುದಿನ ಕ್ಷೇಮದೊಳಿರು” ಮಧ್ಯದಿಂದ ತೆಗೀಬೇಕು. ಇದನ್ನೆಲ್ಲ ಕಲಿಯದೆ ಹೇಳಿಕ್ಕೆ ಆಗುದಿಲ್ಲ. ಕಲೀಬೆಕು. ಇನ್ನು ಇನ್ನೊಂದಿದೆ. “ ಆಯಿತಾಯಿತು ಪಂಚ ಪ್ರಾಣ ಪಾಂಡವರೆಂಬ” ಈದು ಥೈತಿತ್ತಿ…. ಥೈತಿತ್ತಿ…. ಥೈತಿತ್ತಿ… ಥೈತಿತ್ತಿ …. ” ಹೀಗೆ ಹೇಳುದು. ಹೀಗೆ ಮೂರು ವಿಧವಿದೆ. ಇದಕ್ಕೆ ಕುಣಿತವೂ ಬೇರೆ ಬೇರೆ ಇತ್ತು. ಮೊದಲು ಪಡ್ರೆ ಚಂದು, ಅಳಕ್ಕೆ ರಾಮರೈಗಳು ಎಲ್ಲ ಬೇರೆ ಬೇರೆ ರೀತಿ ಕುಣಿತಾ ಇದ್ರು. ಇವತ್ತೆಲ್ಲ ಕಲಿಯದೆ ಹೋಯ್ತು. ಯಾರನ್ನು ಹೇಳುದು? ಯಾರೂ ಅಭ್ಯಾಸ ಮಾಡುದಿಲ್ಲ. ಎರಡು ತಿಂಗಳು ಕಲೀತಾರೆ ಬರ್ತಾರೆ. ವೇಶ ಹಾಕ್ತಾರೆ. ಮತ್ತೆ . ವೇಶ ದೊಡ್ಡ ವೇಶ. ಆ ರೀತಿ ಆಗಿದೆ.

ಸಂದರ್ಶಕರು : ಈಗ ಅರ್ಥಗಾರಿಕೆ ಬಗ್ಗೆ. ತಾಳ ಮದ್ದಲೆ ಅರ್ಥ ಒಂದು ರೀತಿ. ಆಟದ ಅರ್ಥ ಇನ್ನೊಂದು ರೀತಿ. ಇದಕ್ಕೆ ಹೇಗೆ ವ್ಯತ್ಯಾಸ ಕಲ್ಪಿಸಬಹುದು.

ಬಲಿಪ್ಪರು: ತಾಳಮದ್ದಲೆಯಿಂದ ಯಕ್ಷಗಾನ ಬಯಲಾಟ ಅದದ್ದು. ಆರಂಭದಲ್ಲಿ ಮೂಲ ತಾಳಮದ್ದಲೆ. ಈ ದೇವಸ್ಥಾನದಲ್ಲಿ ದೇವದಾಸಿ ಅಂತ ಇದ್ರು ನೋಡಿ. ಅವರು ಕುಣಿತ ಎಲ್ಲ ಆಗಿ ರಾತ್ರಿ ನಿದ್ದೆ ಬರುದಿಲ್ಲ. ಅದಕ್ಕೆ ಬೇಕಾಗಿ ಪದ್ಯ ಹೇಳಿ ಕೂತುಕೊಂಡು ಅರ್ಥ ಹೇಳ್ತಿದ್ರು. ಅರ್ಥ ಹೇಳುದು ಪದ್ಯದಲ್ಲಿ ಇದ್ದಷ್ಟೇ. ಹೆಚ್ಚು ಮಾತಾಡ್ಲಿಕ್ಕೆ ಇಲ್ಲ. ಅದೇನಾಯ್ತು? ದೇವರ ಬಲಿಗೆ ಎಲ್ಲ ವೇಶ ಕಟ್ಟಿ ಸಂವಾದ ಅಂತ ಮಾಡ್ಲಿಕ್ಕೆ ಸುರು ಮಾಡಿದ್ರು. ಕುಣಿತ ಮೊದಲೇ ಗೊತ್ತುಂಟು. ವಾದ್ಯದವರು ಎಲ್ಲ ಮೊದಲೇ ಇದ್ರು ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ. ಈ ಪದ್ಯವನ್ನು ವೇಶ ಕಟ್ಟಿ ಕುಣಿದು ಅರ್ಥ ಹೇಳ್ಲೀಕ್ಕೆ ಶುರು ಮಾಡಿದ್ರು. ಅದೇ ಮತ್ತೆ ರಾತ್ರಿ ಆಟವಾಗಿ ಈ ಮೇಳ ಕಟ್ಟಿ ಮಾಡಿದ್ರು. ತಾಳ ಮದ್ದಲೆಗೂ ಅರ್ಥಗಾರಿಕೆಗೂ ಮೊದಲು ಪದ್ಯದಲ್ಲಿ ಇದ್ದಷ್ಟೇ ಇದದ್ದು ಮೊದಲೆಲ್ಲ ಪೌರಾಣಿಕದಲ್ಲಿ ಶ್ರದ್ದೆ ಜನರಿಗೆ ಜಾಸ್ತಿ ಇತ್ತು. ಹಾಗಾಗಿ ಒಂದು ಪದ್ಯ ಬಿಟ್ರೆ ಅದು ಲೋಪ ಬಂದ ಹಾಗೆ ಆಗ್ತಿತ್ತು. ಅದು ಬಿಟ್ರೆ ದೋಷ ಬರ್ತದೆ ಅಂತ ಇತ್ತು. ಕವಿ ಬರೆದಿದ್ದಾನೆ. ಹಾಗೇ ಒಂದೂ ಪದ್ಯ ಬಿಡದೇ ತಾಳ ಮದ್ದಲೆಗೆ ಕೊನೆವೆರೆಗೆ ಹೇಳ್ತಾಇದ್ರು. ಅದೇ ಕೊನೆಗೆ ಏನಾಯ್ತು ಹೇಳಿದ್ರೆ ಯಕ್ಷಗಾನ ಊರವರ ಕೈಲಿತ್ತು .

ಯಕ್ಷಗಾನಕ್ಕೆ ಬರುವಾಗ ಕೆಲವು ಮಾಸ್ಟ್ರುಗಳು ಸೇರಿದ್ರು ತಾಳಮದ್ಲೆಗೆ ಅರ್ಥ ಹೇಳ್ಳಿಕ್ಕೆ. ಅವರು ಒಳ್ಳೆಡು ಹೇಳ್ತಾರೇಂತ ಆಯ್ತ. ಅದು ಪ್ರಚಾರ ಅಯ್ತು. ಅವರೆಲ್ಲ ಪುರಾಣ ಎಲ್ಲ ಕಲ್ತು ಬರ್ತಾಇದ್ರು. ಅವರ ಮಾತು ಒಳ್ಳೆದಾಯ್ತು. ಆಮೇಲೆ ವಕೀಲರು ಬರ್ಲಿಕ್ಕೆ ಸುರು ಮಾಡಿದ್ರು. ಅವರು ಅರ್ಥದಲ್ಲಿ ಲಾ ಪಾಯಿಂಟು ಹಾಕ್ಲಿಕ್ಕೆ ಸುರು ಮಾಡಿದ್ರು. ಹಾಗೆ ಹರಿದಾಸರು ಬಂದ್ರು. ಅವರು ಹರಿಕಥೆ ಮಾಡಿದ್ರು. ಹಾಗಾಗಿ ಪದ್ಯ ಅಲ್ಲೇ ಉಳೀತು. ಇವರ ಮಾತು ಮುಂದೆ ಬಂತು. ಇವರ ವೈಯಕ್ತಿಕ ವಾದವೇ ಆಯ್ತು. ಪದ್ಯಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಈಗ ಮಾತಡ್ತಾರಲ್ಲ ಅದೂ ಇವತ್ತಿಗೂ ಸಂಬಂಧ ಇಲ್ಲ. ಯಾಕೆಂತ ಹೇಳಿದ್ರೆ? ಆ ಒಂದು ಪದ್ಯ ಹೇಳಿದ್ರೆ ಅವರಿಗೆ ಬೇಕಾದಷ್ಟು ಹೊತ್ತು ಮಾತಾಡಿಕೊಳ್ತಾರೆ. ಅದು ಅಲ್ಲದೆ ಯಾರಿಗೆ ಪದ್ಯ ಹೇಳಿದೆ ಅಂತ್ಲೂ ಇಲ್ಲ. ಇದು ಏನಾಗಿದೆ ಅಂದ್ರೆ? ಅರ್ಜುನನಿಗೆ ಒಮ್ದು ಪದ್ಯ ಕೊಟ್ರೆ ಎದುರು ವೇಶದವ ಕರ್ಣನೂ ಅದಕ್ಕೆ ಅರ್ಥ ಹೇಳುದು. ಕರ್ಣನಿಗೆ ಬೇರೆ ಪದ್ಯ ಉಂಟು. ನಿಜವಾಗಿ ಇದ್ದದ್ದು ಹೇಗೆ ಅಂದ್ರೆ,ಅವನ ಪದ್ಯಕ್ಕ ಅವನು ಮಾತಾಡ್ಬೇಕು. ಇವನ ಪದಕ್ಕ ಇವನು ಮಾತಾಡ್ಬೇಕುಕ್ರಮ ಇವತ್ತು ಏನಾಗಿದೆ ಅಂದ್ರೆ, ಅವನಿಗೆ ಇವನು ಮಾತಾಡುದು ಇವನಿಗೆ ಅವನು ಮಾತಾಡುದು. ಹೀಗೆ ವೈಯಕ್ತಿಕ ವಾದ ಆಗಿದೆ. ಅದು ಅರ್ಥಗಾರಿಕೆ ಅಲ್ಲ. ಹಾಗೆ. ಈ ಅರ್ಥ ಗಾರಿಕೆಗೆ ಬಂದವರು ಯಾರೇ ಅಗ್ಲಿ ಅವರು ಯಾವುದನ್ನು ಕಲಿತು ಬಂದಿದ್ದಾರೆ ಅದನ್ನೇ ಹೇಳುವುದು. ಈ ವಕೀಲರು ಬಂದ್ರೆ ಅವರು ಲಾ ಪಾಯಿಂಟು ಹಾಕುದು. ಇನ್ನು ಶಾಲೆ ಮಾಸ್ತ್ರುಗಳು ಬಂದ್ರೆ ಅವರು ಶಬ್ಧಾರ್ಥವೇ ಮಕ್ಕಳಿಗೆ ಪಾಠ ಮಾಡಿದ ಹಾಗೆ ಹೇಳುದು. ಶಬ್ದಕ್ಕೆ ಇಂತಹಾ ಅರ್ಥ ಇಂಥದ್ದೇ ಹೇಳುದು. ಇನ್ನು ಹರಿದಾಸರು ಬರ್ಲಿಕ್ಕೆ ಸುರು ಮಾಡಿದ್ರು ಅವರಿಗೆ ಹರಿಕಥೆ ಮಾಡಿ ಒಳ್ಳೇ ಅಭ್ಯಾಸ ಉಂಟು. ಅವರು ಹರಿಕಥೆ ಮಾಡಿ ಮಾತು ತುಂಬಿಸ್ಲಿಕ್ಕೆ ಸುರು ಮಾಡಿದ್ರು. ನೀವು ನೋಡಿ ಬೇಕಿದ್ರ ಹೌದಾ ಅಲ್ವ ಅಂತ. ಈ ರೀತಿಯಾಗಿ ಯಕ್ಷಗಾನ ಬೆಳೆದು ಬಂದಿದ. ಜನರಿಗೆ ಒಂದು ಆಸಕ್ತಿ. ಅದು ಜನರಿಗೆ ಬಿಟ್ಟದ್ದು. ನಮಿಗೆ ಬಿಟ್ಟದ್ದಲ್ಲ. ನಾನು ಬಂದ ದೋಷ ಹೇಳಿದ್ದು.

ಯಕ್ಷಗಾನ ಎಂದ್ರೆ ನಾಟಕೀಯ. ನಾಟಕದಲ್ಲಿ ಅವರ ಯಜಮಾನ ಇದ್ದಾನಲ್ಲ? ನಾಟಕ ತಯಾರು ಮಾಡಿದವ, ಅವನೇ ಯಜಮಾನ. ಅವನು ಏಷ್ಟು ಹೇಳಿದ್ದಾನೋ ಅಷ್ಟೇ ಹೇಳಬೇಕು, ಅದಕ್ಕಿಂತ ಹೆಚ್ಚಿಗೆ ಹೇಳುವ ಅಧಿಕಾರ ಅರ್ಥಧಾರಿಗೆ ಇಲ್ಲ. ಸಂವಾದ ಎಲ್ಲ ಅವನು ಬರೆದು ಕೊಟ್ಟಹಾಗೆ ಹೇಳ್ಬೇಕು. ಅದನ್ನು ಬಾಯಿಪಾಠ ಮಾಡಿ ಹೇಳುದು ಕ್ರಮ. ಇದರಲ್ಲಿ ಅರ್ಥ ಬಾಯಿ ಪಾಠ ಮಾಡ್ಲಿಕ್ಕೆ ಇಲ್ಲ. ಯಕ್ಷಗಾನದಲ್ಲಿ ಆ ಬಾಬ್ತು ಭಾಗವತ ಪದ್ಯ ಹೇಳುದು. ಭಾಗವತ ಏನು ಪದ ಹೇಳಿದ್ದಾನೆ?, ಆರಂಭದಿಂದ ಎಲ್ಲಿ ತಂದು ಇಟ್ಟಿದ್ದಾನೆ ಅಲ್ಲಿವರೆಗೆ ನಿಲ್ಲಿಸಬೇಕು. ಯಕ್ಷಗಾನದಲ್ಲಿ ಭಾಗವತನೇ ಡೈರೆಕ್ಟರು. ನಾಟಕದಲ್ಲಿ ಬರೆದು ಕೊಟ್ಟವ. ಹಾಗೆ ಇದ್ರೆ ಕವಿ ಬರೆದ ಪದ್ಯ ಪ್ರಸಂಗ ಬೆಳಗ್ಗೆ ವರೆಗೆ ಆಗುವಾಗ ಅಶಯ ನಡೀತದೆ. ಯಕ್ಷಗಾನಕ್ಕೆ ಬೇಕಾಗಿಯೇ ಪ್ರಸಂಗ ಬರೆದದ್ದು. ಜನರಿಗೆ ಅಥವಾ ಅರ್ಥಧಾರಿಗೆ ಬೇಕಾಗಿ ಬರೆದದ್ದು ಅಲ್ಲ. ಹಾಗೆ ಅದು ಬೇಡಾಂತ ಇದ್ರೆ ಆಗ ಒಬ್ಬನನ್ನು ವಾಚನಕ್ಕೆ ಮಾಡುದು. ಜೈಮಿನಿ ಭಾರತ, ಭಾಗವತ ಎಲ್ಲ ಉಂಟಲ್ಲ? ವಾಚನ ಮಾಡುದು. ಇವನು ಮಾತಡುದು. ಚರ್ಚಾಕೂಟ ಸಂವಾದ ಅಂತ ಮಾಡುದು. ಮಾತಡಿಕೊಳ್ಳುದು. ಅದು ಯಕ್ಷಗಾನ ಆಗುದಿಲ್ಲ. ಯಕ್ಷಗಾನ ಅಂದ್ರೆ ಹೀಗೆ ಮಾಡಿಕೊಂಡು ಹೋಗ್ತಾರೆ. ಜನರಿಗೆ ಒಂದು ರಂಜನೆ ಮತ್ತೆ ಮಾಡ್ತಾರೆ. ಮಾಡುದಕ್ಕೆ ನನ್ನ ಆಕ್ಷೇಪ ಇಲ್ಲ. ಪದ್ಯದ್ಲಲ್ಲ ಎಷ್ಟು ಉಂಟು ಅಷ್ಟು. ಮತ್ತೆ ಕವಿ ಪ್ರಸಂಗ ಬರೆದವನು ಅವನಿಗೆ ಅಷ್ಟು ಅನುಭವ ಉಂಟು. ನಮ್ಮ ಹಳೇ ಕವಿಗಳು. ಈಗಿನ ಕವಿಗಳು ಅಲ್ಲ.



ಕೃಪೆ : http://yakshachintana. wordpress. com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ